Showing posts with label ಬೀಜ ಖರೀದಿಸಲು ಬಾರ್ ಕೋಡ್ ಕಡ್ಡಾಯ ಎಂದ ಕೃಷಿ ಇಲಾಖೆ. Show all posts
Showing posts with label ಬೀಜ ಖರೀದಿಸಲು ಬಾರ್ ಕೋಡ್ ಕಡ್ಡಾಯ ಎಂದ ಕೃಷಿ ಇಲಾಖೆ. Show all posts

Sunday, May 28, 2023

ಬೀಜ ಖರೀದಿಸಬೇಕೆಂದರೆ ಬಾರ್ ಕೋಡ್ ಬೇಕೆ ಬೇಕು - ಕೃಷಿ ಇಲಾಖೆಯಿಂದ ಅಕ್ರಮ ತಡೆಯಲು ಹೊಸ ಪ್ಲಾನ್..


ಕರ್ನಾಟಕ ಕೃಷಿ ಇಲಾಖೆ :- ಕೃಷಿ ಚಟುವಟಿಕೆ ಚುರುಕುಗೊಂಡಿದ್ದು ರಿಯಾಯಿತಿ ದರದಲ್ಲಿ ಬೀಜ ಮಾರಾಟದಲ್ಲಿ ಅಕ್ರಮ ನಿಯಂತ್ರಣಕ್ಕೆ ಇದೇ ಮೊದಲ ಬಾರಿಗೆ ಕೃಷಿ ಇಲಾಖೆ ರೈತರಿಗೆ ಬಾರ್ ಕೋಡ್ ಸ್ಕ್ಯಾನರ್ ಕಡ್ಡಾಯಗೊಳಿಸಿದೆ. ಖರೀದಿಗೆ ಕೋಡ್ ಸ್ಕ್ಯಾನರ್ ಆದ ಬಳಿಕವಷ್ಟೇ ಕಂಪ್ಯೂಟರ್‌ನಲ್ಲಿ ನಮೂದಾಗಿ ಖರೀದಿ ರಸೀದಿ ಬರುತ್ತದೆ. ಕ್ಯಾಷ್ಲೆಸ್ ವಹಿವಾಟಿನ ಬಿಸಿ ಕೃಷಿ ವಲಯಕ್ಕೂ ತಟ್ಟಿದ್ದು, ರೈತರು ಕೂಡ ಇ-ಆಡಳಿತಕ್ಕೆ ತಮ್ಮನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ವಿಜಯನಗರ :-
ರಿಯಾಯಿತಿ ದರದ ಬಿತ್ತನೆ ಬೀಜ ಮಾರಾಟದಲ್ಲಿ ಅಕ್ರಮ ತಡೆಗಟ್ಟಲು ಕೃಷಿ ಇಲಾಖೆ ಇದೇ ಮೊದಲ ಬಾರಿಗೆ ರೈತರಿಗೆ ಬಾರ್‌ ಕೋಡ್‌ ಸ್ಕ್ಯಾನರ್‌ ಕಡ್ಡಾಯಗೊಳಿಸಿದೆ.

ಪ್ರಸಕ್ತ ಮುಂಗಾರು ಜೂನ್‌ ಮೊದಲ ವಾರದಿಂದ ಆರಂಭವಾಗಲಿದೆ. ವಾಡಿಕೆಯಂತೆ ವಾರ್ಷಿಕ 612 ಮಿ.ಮೀ. ಮಳೆ ಸುರಿಯಬೇಕಿದೆ. ಈ ಬಾರಿ ತಾಲೂಕಿನಲ್ಲಿ 60ಸಾವಿರ ಹೆಕ್ಟರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ.

ಇದರಲ್ಲಿ ಮುಂಗಾರು ಒಣ ಬೇಸಾಯ ಕೃಷಿ ಜಮೀನಿನಲ್ಲಿ 52,841 ಹೆಕ್ಟರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ. ಉಳಿದ ಪ್ರದೇಶ ತೋಟಗಾರಿಕೆ ಕೃಷಿ ವ್ಯಾಪ್ತಿಗೆ ಬರುತ್ತಿದೆ.

32,350ಹೆಕ್ಟರ್‌ ಪ್ರದೇಶದಲ್ಲಿ ಮೆಕ್ಕೆಜೋಳ, 5ಸಾವಿರ ಹೆಕ್ಟರ್‌ ಭತ್ತ, 2200 ಹೆಕ್ಟರ್ ಜೋಳ, 600ಹೆಕ್ಟರ್ ರಾಗಿ, 700ಹೆಕ್ಟರ್ ಸಜ್ಜಿ, 1700ಹೆಕ್ಟರ್ನಲ್ಲಿ ತೊಗರಿ, ಉಳಿದಂತೆ ಇತರ ಪ್ರದೇಶಗಳಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಕೇಂದ್ರಗಳು
ರೈತರ ಅನುಕೂಲಕ್ಕೆ ಮತ್ತು ಬಿತ್ತನೆ ಬೀಜಗಳ ತ್ವರಿತ ಲಭ್ಯತೆಗಾಗಿ ತಾಲೂಕಿನ ಹಿರೇಹಡಗಲಿ, ಹೂವಿನಹಡಗಲಿ, ಇಟ್ಟಿಗಿ ರೈತ ಸಂಪರ್ಕ ಕೇಂದ್ರಗಳ ಜತೆಗೆ ಹೆಚ್ಚುವರಿಯಾಗಿ ಹಿರೇಮಲ್ಲನಕೆರೆ, ಹೊಳಗುಂದಿ, ಸೋಗಿ, ಹೊಳಲುನಲ್ಲಿ ಮಾರಾಟ ಕೇಂದ್ರಗಳನ್ನು ತೆರೆಯಲಾಗುತ್ತದೆ.

ದಾಸ್ತಾನು
ಈಗಾಗಲೇ 4060ಕ್ವಿಂಟಾಲ್‌ ಮೆಕ್ಕೆಜೋಳ, 760ಕ್ವಿಂಟಲ್ ಭತ್ತ, 220ಕ್ವಿಂಟಲ್ ಜೋಳ, 108ಕ್ವಿಂಟಲ್, ಸೂರ್ಯಕಾಂತಿ ಬಿತ್ತನೆ ಬೀಜಗಳ ಬೇಡಿಕೆಯಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಜೂನ್ 1 ರಿಂದ ಅಧಿಕೃತವಾಗಿ ಬಿತ್ತನೆ ಬೀಜ ಮಾರಾಟಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ.

ರಿಯಾಯಿತಿ
ಪ್ರಸಕ್ತ ವರ್ಷ ಪ್ರತಿ ಬಿತ್ತನೆ ಬೀಜಕ್ಕೆ ಸರಕಾರ ರಿಯಾಯಿತಿ ದರವನ್ನು ಪ್ರಕಟಿಸಿದೆ. ನಾನಾ ಕಂಪನಿಗಳ ಮೆಕ್ಕೆಜೋಳ ಪ್ರತಿ ಕೆಜಿಗೆ 25 ರೂ.(ಸಾಮಾನ್ಯರಿಗೆ), ಪರಿಶಿಷ್ಟ ಜಾತಿ, ಪಂಗಡಕ್ಕೆ 30ರೂ.ನಂತೆ ರಿಯಾಯಿತಿ ನೀಡಲಾಗುತ್ತಿದೆ. ಪ್ರತಿ ರೈತರಿಗೆ 5ಎಕರೆಗೆ ಮಾತ್ರ ರಿಯಾಯಿತಿ ದರವನ್ನು ಸೀಮಿತಗೊಳಿಸಿದೆ.

ಬಾರ್‌ ಕೋಡ್‌
ರಿಯಾಯಿತಿ ದರದಲ್ಲಿ ಬೀಜ ಮಾರಾಟದಲ್ಲಿಅಕ್ರಮ ನಿಯಂತ್ರಣಕ್ಕೆ ಇದೇ ಮೊದಲ ಬಾರಿಗೆ ರೈತರಿಗೆ ಬಾರ್‌ ಕೋಡ್‌ ಸ್ಕ್ಯಾನರ್‌ ಕಡ್ಡಾಯಗೊಳಿಸಿದೆ. ಖರೀದಿಗೆ ಕೋಡ್‌ ಸ್ಕ್ಯಾನರ್‌ ಆದ ಬಳಿಕವಷ್ಟೇ ಗಣಕ ಯಂತ್ರದಲ್ಲಿ ನಮೂದಾಗಿ ಖರೀದಿ ರಸೀದಿ ಬರುತ್ತದೆ. ರಿಯಾಯಿತಿ ದರದ ಹೆಚ್ಚುವರಿ ಬೀಜ ಖರೀದಿಗೆ ಬಾರ್‌ ಕೋಡ್‌ ಸ್ಕ್ಯಾನರ್‌ ಆಗದೆ ಲಾಕ್‌ ಆಗುತ್ತದೆ. ರಿಯಾಯಿತಿ ದರದ ಮಾರಾಟ ದುರುಪಯೋಗವಾಗುವುದನ್ನು ನಿಯಂತ್ರಿಸುತ್ತದೆ.
ಜತೆಗೆ ಆಧಾರ್‌ ಕಾರ್ಡ್‌, ಪಹಣಿ ಕೂಡ ಕಡ್ಡಾಯವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಕ್ಯಾಷ್‌ಲೆಸ್‌ ವಹಿವಾಟಿನ ಬಿಸಿ ಕೃಷಿ ವಲಯಕ್ಕೂ ತಟ್ಟಿದೆ. ರೈತರು ಕೂಡ ಇ-ಆಡಳಿತಕ್ಕೆ ತಮ್ಮನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಬೀಜ ಖರೀದಿಸಲು ರೈತರು ಕೇವಲ ಹಣ ಪಾವತಿಯಲ್ಲದೆ ಯುಪಿಐ ಸೌಲಭ್ಯವನ್ನೂ ಒದಗಿಸಲಾಗಿದೆ.

ಗೊಬ್ಬರ
ಕೃಷಿ ಇಲಾಖೆ ಪ್ರಸಕ್ತ ಸಾಲಿಗೆ ಅಗತ್ಯವಿರುವ ಎಲ್ಲ ವಿಧದ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡಿದೆ. ಈ ಬಾರಿಯೂ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ರಸಗೊಬ್ಬರ ವಿತರಿಸಲಾಗುತ್ತಿದೆ. ಜತೆಗೆ ಅಧಿಕೃತ ಖಾಸಗಿ ಮಾರಾಟಗಾರರಿಂದಲೂ ರೈತರಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ವಿಲೇವಾರಿ ಮಾಡಲಾಗುತ್ತಿದೆ. ಬರಿ ಮೇ ತಿಂಗಳಿಂದ ಆಗಸ್ಟ್‌ವರೆಗೆ 8ಸಾವಿರ ಟನ್‌ ಯೂರಿಯಾ ಗೊಬ್ಬರದ ಬೇಡಿಕೆಯಿದೆ. 1127 ಮೆಟ್ರಿಕ್‌ ಟನ್‌ ಡಿಎಪಿ ಸೇರಿ 2ಸಾವಿರ ಟನ್‌ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದರಲ್ಲಿ 600ಕ್ಕೂ ಹೆಚ್ಚು ಮೆಟ್ರಿಕ್‌ ಟನ್‌ ಗೊಬ್ಬರವನ್ನು ಮಾರಾಟ ಮಾಡಲಾಗಿದೆ.

ಅಕ್ರಮ ಮಾರಾಟ ಕುರಿತು ತೀವ್ರ ನಿಗಾ
ತಾಲೂಕಿನಾದ್ಯಂತ ಬಿತ್ತನೆ ಬೀಜಗಳ ಅಕ್ರಮ ಮಾರಾಟ ಕುರಿತು ತೀವ್ರ ನಿಗಾ ಇಡಲಾಗಿದೆ. ಸೀಡ್‌ ಹಬ್‌ ಪ್ರದೇಶವಾಗಿರುವ ರಾಣೆಬೆನ್ನೂರು ಭಾಗದಿಂದ ತಾಲೂಕಿನ ಹೊಳಲು ಹಾಗೂ ಸುತ್ತ ಗ್ರಾಮಗಳಲ್ಲಿ ಹೆಚ್ಚು ಅಕ್ರಮ ಮತ್ತು ಚಿಲ್ಲರೆ ಬಿತ್ತನೆ ಬೀಜಗಳು ಮಾರಾಟವಾಗುವ ಬಗ್ಗೆ ವ್ಯಾಪಕ ದೂರುಗಳು ಕೇಳಿವೆ. ಈ ಕುರಿತು ಹೊಳಲು ಪೊಲೀಸ್‌ ಉಪ ಠಾಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಒಂದು ವೇಳೆ ಅಕ್ರಮ ಮಾರಾಟ ಪತ್ತೆಯಾದರೆ ಕೂಡಲೇ ಜಪ್ತಿ ಮಾಡಲಾಗುವುದು. ಜತೆಗೆ ಅಕ್ರಮ ಬೀಜ ಮಾರಾಟ ಕಾಯಿದೆ 1968 ಅಡಿ ಪ್ರಕರಣ ದಾಖಲಿಸಲಾಗುತ್ತದೆ.
ಪ್ರಸಕ್ತ ಮುಂಗಾರು ಹಂಗಾಮು ಜೂನ್‌ ಮೊದಲ ವಾರದಿಂದ ಆರಂಭವಾಗಲಿದ್ದು, ಬಿತ್ತನೆ ಬೀಜ, ರಸಗೊಬ್ಬರ, ಪರಿಕರ ವಿತರಣೆ ಸೇರಿದಂತೆ ಇತರ ಕೃಷಿ ಚಟುವಟಿಕೆಗಳಿಗೆ ಇಲಾಖೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಂಡಿದೆ. ಅಕ್ರಮ ತಡೆಯಲು ರೈತರಿಗೆ ಬಾರ್‌ ಕೋಡ್‌ ಸ್ಕ್ಯಾನರ್‌ ಕಡ್ಡಾಯಗೊಳಿಸಲಾಗಿದೆ ಎಂದು ಹೂವಿನಹಡಗಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹ್ಮದ್‌ ಅಶ್ರಫ್‌ ತಿಳಿಸಿದ್ದಾರೆ.